ಸೋಮೇಶ್ವರ 3 

	ಕಲ್ಯಾಣದ ಚಾಳುಕ್ಯವಂಶದ ದೊರೆ (1127-39). ಆರನೆಯ ವಿಕ್ರಮಾದಿತ್ಯನ ಮಗ. ಭೂಲೋಕಮಲ್ಲ ಈತನ ಪ್ರಸಿದ್ಧ ಬಿರುದು. ಇದಲ್ಲದೆ ತ್ರಿಭುವನಮಲ್ಲ, ಸರ್ವಜ್ಞಚಕ್ರವರ್ತಿ ಮುಂತಾದ ಬಿರುದುಗಳೂ ಇವನಿಗಿದ್ದುವು. ಇವನ ಪಟ್ಟಾಭಿಷೇಕ ವಿಕ್ರಮಾದಿತ್ಯನ ಮರಣಾನಂತರ 1127 ಫೆಬ್ರವರಿ 20ರಂದು ಜರುಗಿತು.

	ಇವನ ಆಳಿಕೆಯ ಪ್ರಾರಂಭದಲ್ಲಿಯೇ ವಿಕ್ರಮಾದಿತ್ಯನ ಮರಣದಿಂದ ಉತ್ತೇಜಿತನಾದ ವಿಕ್ರಮಚೋಳನು ಚೋಳರು ಕಳೆದುಕೊಂಡಿದ್ದ ವೆಂಗಿಯ ಭಾಗಗಳನ್ನು ಪುನರ್ವಶಪಡಿಸಿಕೊಳ್ಳಲು ಕಾರ್ಯನಿರತನಾದ. 1127ರ ಹೊತ್ತಿಗೆ ಕೊಳ್ಳಿಪಾಕೆಯ ಭಾಗ ಅವನ ವಶಕ್ಕೆ ಬಂದು, ಅಲ್ಲಿ ನಂಬಯ್ಯನೆಂಬುವನೊಬ್ಬ ಅವನ ಸಾಮಂತನಾಗಿ ಆಳುತ್ತಿದ್ದ. ವೆಂಗಿಯ ಕರಾವಳಿ ಹಾಗೂ ಉತ್ತರದ ಭಾಗಗಳೂ 1130ರ ಹೊತ್ತಿಗೆ ಚೋಳರ ವಶವಾಗಿ ಸೋಮೇಶ್ವರನ ಕಾಲದಲ್ಲಿ ವೆಂಗಿಪ್ರಾಂತ ಪೂರ್ಣವಾಗಿ ಚಾಳುಕ್ಯರ ಕೈಬಿಟ್ಟಿತು. ದಕ್ಷಿಣದಲ್ಲಿದ್ದ ವಿಷ್ಣುವರ್ಧನ ಭೂಲೋಕಮಲ್ಲನ ಸಾಮಂತನಾಗಿದ್ದರೂ 1135-36ರ ಸುಮಾರಿನಲ್ಲಿ ಇವನು ಉಚ್ಚಂಗಿ ಮತ್ತು ಬನವಾಸಿಗಳನ್ನು ಆಕ್ರಮಿಸಿದನೆಂದು ಕೆಲವು ಶಾಸನಗಳು ತಿಳಿಸುತ್ತವೆ.

	ಒಟ್ಟಿನಲ್ಲಿ ಇವನ ಕಾಲದಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಿತ್ತು. ಅರಸನ ಒಲವು ರಾಜಕೀಯಕ್ಕಿಂತಲೂ ಹೆಚ್ಚಾಗಿ ಸಾಹಿತ್ಯ ಕಲೆಗಳ ಕಡೆಗೆ ಇತ್ತು. ಈತ ರಾಜನಾಗಿದ್ದಂತೆ ಸ್ವತಃ ಕವಿಯೂ ಕವಿಪೋಷಕನೂ ಆಗಿದ್ದ. ವಿಕ್ರಮಾಂಕಾಭ್ಯುದಯ ಮತ್ತು ಮಾನಸೋಲ್ಲಾಸ ಇವನ ಕೃತಿಗಳು. ವಿಕ್ರಮಾಂಕಾಭ್ಯುದಯ ಐತಿಹಾಸಿಕ ಕಾವ್ಯ. ಚಂಪೂವಿನಲ್ಲಿದೆ. ಈ ಕಾವ್ಯ ಚಾಳುಕ್ಯರ ಇತಿಹಾಸದ ಮೇಲೆ ಸ್ವಲ್ಪಮಟ್ಟಿಗೆ ಬೆಳಕು ಚೆಲ್ಲುತ್ತದೆ. ಕೃತಿ ಸಂಪೂರ್ಣವಾಗಿ ಉಪಲಬ್ಧವಿಲ್ಲ.	                             
    (ಟಿ.ಎಸ್.ಎಸ್.ಎನ್.)

	ಮಾನಸೋಲ್ಲಾಸ ಸು. 1130ರಲ್ಲಿ ರಚಿತವಾದಂತೆ ತೋರುತ್ತದೆ. ಸಂಸ್ಕøತದಲ್ಲಿರುವ ಈ ಗ್ರಂಥ ಸೋಮೇಶ್ವರ ರಚಿಸಿದ್ದಲ್ಲವೆಂದೂ ಅವನ ಆಸ್ಥಾನದಲ್ಲಿದ್ದ ಯಾರೊ ಒಬ್ಬ ಪಂಡಿತ ಗ್ರಂಥರಚನೆ ಮಾಡಿದ್ದಾನೆಂದೂ ತರುವಾಯ ಸೋಮೇಶ್ವರನ ಹೆಸರಿನಲ್ಲಿ ಪ್ರಕಾಶಕ್ಕೆ ಬಂದಿರಬಹುದೆಂದೂ ಕೆಲವು ವಿದ್ವಾಂಸರ ಮತ. ಇದೊಂದು ವಿಶ್ವಕೋಶ ಲಕ್ಷಣವುಳ್ಳ ಗ್ರಂಥ. ಇದಕ್ಕೆ ಅಭಿಲಷಿತಾರ್ಥ ಚಿಂತಾಮಣಿ ಎಂಬ ಹೆಸರೂ ಇದೆ. ಅಲ್ಲಲ್ಲಿ ಗದ್ಯಭಾಗಗಳೂ ಕಂಡುಬರುತ್ತವೆ. ಇದರಲ್ಲಿ ಐದು ಪ್ರಕರಣ ಗಳೂ 100 ಅಧ್ಯಾಯಗಳೂ ಇವೆ. ಅನುಷ್ಟುಭ್‍ವೃತ್ತದಲ್ಲಿ ರಚಿತವಾಗಿದೆ. ಅನೇಕ ಪ್ರಾಪಂಚಿಕ ವಿಷಯಗಳ ಮತ್ತು ವಸ್ತುಗಳ ಪ್ರತಿಪಾದನೆಯಿಂದ ಕೂಡಿದ ಇದರ ವೈಶಿಷ್ಟ್ಯವೆಂದರೆ ವಿಚಾರ ವೈವಿಧ್ಯ. ಒಂದನೆಯ ಪ್ರಕರಣದಲ್ಲಿ ವಜ್ರ್ಯಗಳ ಮತ್ತು ದಾನ, ದೇವತಾಭಕ್ತಿಗಳ ವಿಚಾರವಿದೆ. ಎರಡನೆಯದು ರಾಜನೀತಿ ವಿಷಯಕವಾಗಿದ್ದು ಅಮಾತ್ಯ, ಕೋಶ, ರಾಷ್ಟ್ರ, ದುರ್ಗ, ಬಲ, ಸಂಧಿವಿಗ್ರಹ, ಉಪಾಯ, ದಂಡ ಮುಂತಾದವುಗಳ ವಿವರಣೆಯನ್ನೊಳಗೊಂಡಿದೆ. ಮೂರನೆಯ ಪ್ರಕರಣ ಉಪಭೋಗಗಳಿಗೆ ಸಂಬಂಧಪಟ್ಟಿದೆ. ಇದರಲ್ಲಿ ಸ್ನಾನ, ತಾಂಬೂಲ, ವಿಲೇಪನ, ವಸ್ತ್ರ, ಮೌಲ್ಯ, ಭೂಷಣ, ಪುತ್ರ, ಅನ್ನ, ಪಾನೀಯ, ಶಯ್ಯಾ, ಯೋಷಿತ್ ಮುಂತಾದ ಭೋಗಗಳ ವಿಚಾರಗಳೂ ಗೃಹನಿರ್ಮಾ ಣೋಪಯುಕ್ತ ಮುಹೂರ್ತಾದಿಗಳು, ಶಿಲ್ಪ, ಮೂರ್ತಿಲಕ್ಷಣ, ಚಿತ್ರಲಕ್ಷಣ ಮುಂತಾದ ವಿಷಯಗಳೂ ಕಂಡುಬರುತ್ತವೆ. ನಾಲ್ಕು ಮತ್ತು ಐದನೆಯ ಪ್ರಕರಣಗಳಲ್ಲಿ ವಿನೋದಗಳ ಮತ್ತು ಕ್ರೀಡೆಗಳ ವಿಷಯ ಪ್ರತಿಪಾದಿತವಾಗಿವೆ. ಅಲ್ಲದೆ ಗಣಿತ, ಜ್ಯೋತಿಷ, ಹಸ್ತಸಾಮುದ್ರಿಕ, ಅಶ್ವಗಜಗಳ ಶಿಕ್ಷಣ, ರತ್ನಗಳು, ವಿವಾಹ, ಪಾಕವಿದ್ಯೆ, ಸಂಗೀತ, ಸುಗಂಧಗಳು ಇತ್ಯಾದಿ ವಿಷಯಗಳೂ ಇವುಗಳಲ್ಲಿದೆ. ಹೀಗೆ ಅನೇಕ ವಸ್ತುಗಳ ಮತ್ತು ವಿದ್ಯೆಗಳ ವಿಚಾರವನ್ನು ತಿಳಿಸುವ ಈ ಗ್ರಂಥ ಭಾರತೀಯ ಸಂಸ್ಕøತಿಯ ಬೆಳೆವಣಿಗೆಯ ದೃಷ್ಟಿಯಿಂದ ಮಹತ್ತ್ವದ ಸ್ಥಾನವನ್ನು ಪಡೆದಿರುವುದಲ್ಲದೆ ಎಲ್ಲರ ಪ್ರೀತಿಮನ್ನಣೆಗಳಿಗೂ ಪಾತ್ರವಾಗಿದೆ.

	ಸೋಮೇಶ್ವರನಿಗೆ ಎಕ್ಕಲದೇವಿ ಮತ್ತು ಬರ್ಮಲದೇವಿ ಎಂಬ ಪತ್ನಿಯರೂ ಜಗದೇಕಮಲ್ಲ II ಮತ್ತು ತೈಲಪ III ಎಂಬ ಪುತ್ರರೂ ಇದ್ದರು. ಸೋಮೇಶ್ವರ 1139ರಲ್ಲಿ ಮೃತನಾದ. ಅನಂತರ ಇವನ ಮಗ ಎರಡನೆಯ ಜಗದೇಕಮಲ್ಲ ಪಟ್ಟಕ್ಕೆ ಬಂದ.
												(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ